ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ `ಕ್ರೇಜಿ ಕೀರ್ತಿ`ಎಂಬ ಸಿನಿಮಾ ಕೂಡ ಸೇರಿದೆ. ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟು ಹಾಕುವ ಉತ್ಸುಕದಲ್ಲಿದೆ.
ಪ್ರಿಯ ಬಾಲಾಜಿ ಪ್ರೊಡಕ್ಷನ್ಸ್ ಮೂಲಕ ತಯಾರಾಗಿರುವ ಈ ಚಿತ್ರಕ್ಕೆ ಬಾಲಾಜಿ ಮಾಧವ ಶೆಟ್ಟಿ ನಿರ್ದೇಶಕರು. ಚಿತ್ರದ ನಿರ್ಮಾಪಕರು ಕೂಡ ಅವರೆ. ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದಿದೆ. ಇನ್ನು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರತಂಡ, ಮಾಧ್ಯಮ ಮುಂದೆ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿತು.
ನಿರ್ದೇಶಕ, ನಿರ್ಮಾಪಕರಾಗಿರುವ ಬಾಲಾಜಿ ಮಾಧವ ಶೆಟ್ಟಿ ಮಾತನಾಡಿ, ಇದು ಮೊದಲ ಸಿನಿಮಾ. ಸಾಕಷ್ಟು ಶ್ರಮ ವಹಿಸಿ ಸಿನಿಮಾ ಮಾಡಿದ್ದೇವೆ. ಇದೊಂದು ಯುವಜನತೆಯ ಮೇಲೆ ಮಾಡಿರುವ ಸಿನಿಮಾ. ಕಾಲೇಜಿನ ವಿದ್ಯಾರ್ಥಿಗಳ ಲೈಫ್ ಸ್ಟೈಲ್ ಕುರಿತ ಕಥೆ ಇದೆ. ಒಂದೊಳ್ಳೆಯ ರೊಮ್ಯಾಂಟಿಕ್ ಕಥಾಹಂದರ ಸಿನಿಮಾದಲ್ಲಿದೆ. ಮನಸ್ಸಿಗೆ ಇಷ್ಟವಾಗುವಂತಹ ಹಾಡುಗಳು ಸಿನಿಮಾದ ಪ್ಲಸ್. ಇನ್ನು, ಈ ಸಿನಿಮಾ ಇಷ್ಟೊಂದು ಚೆನ್ನಾಗಿ ಮೂಡಿ ಬರಲು ಕಾರಣ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್. ಅವರಿಗೆ ಇಲ್ಲೊಂದು ವಿಶೇಷ ಎನಿಸುವ ಪಾತ್ರವಿದೆ. ಪಾತ್ರದ ಜೊತೆಗೆ ಸಿನಿಮಾ ಹೇಗೆ ಬರಬೇಕು, ಹೇಗಿರಬೇಕು ಎಂಬ ವಿಷಯಗಳ ಬಗ್ಗೆ ತಿಳಿಹೇಳುವ ಮೂಲಕ ಓಂ ಪ್ರಕಾಶ್ ರಾವ್ ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬರಲು ಕಾರಣರಾಗಿದ್ದಾರೆ.